ಚಾಲ್ಸ್, ಜಾಕ್ವಿಸ್ ಅಲೆಕ್ಸಾಂಡರ್ ಸೀಜರ್ - 
1746-1823. ಫ್ರೆಂಚ್ ಭೌತ ಮತ್ತು ಗಣಿತ ವಿಜ್ಞಾನಿ. ಜನನ 12-11-1746. ಮರಣ 7-4-1823. ಹಣಕಾಸಿನ ಸಚಿವಖಾತೆಯಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ಸೇರಿದ. ಕಾರಣಾಂತರಗಳಿಂದ ಈ ಪ್ರತಿಭಾವಂತ ಕೆಲಸದಿಂದ ವಜಾ ಮಾಡಲ್ಪಟ್ಟ. ಬೇರೇನೂ ಕೆಲಸವಿಲ್ಲದ ಕಾರಣದಿಂದಲೋ ಏನೋ ಈತ ಫ್ರಾಂಕ್ಲಿನನ ವಿದ್ಯುತ್ ಪ್ರಯೋಗಗಳನ್ನು ಜನರ ಮುಂದೆ ಪ್ರದರ್ಶಿಸಲಾರಂಭಿಸಿದ. ಮುಂದೆ ಈ ರೀತಿಯ ವಿಜ್ಞಾನ ಪ್ರದರ್ಶನಗಳು ಫ್ರಾನ್ಸಿನಲ್ಲಿ ಒಂದು ನಾಜೂಕೇ ಆಯಿತೆನ್ನಬಹುದು. ಪ್ರಯೋಗಗಳ ಪ್ರದರ್ಶನಗಳು ಹೆಚ್ಚಿದಂತೆ ಚಾಲ್ರ್ಸನ ಆಸಕ್ತಿ ಗಣಿತ ಹಾಗೂ ಭೌತವಿಜ್ಞಾನಗಳಲ್ಲಿ ಬೆಳೆಯತೊಡಗಿ ಸ್ವತಂತ್ರ ಸಂಶೋಧನೆಗೆ ದಾರಿಯಾಯಿತು. ಹಾರುವ ಬಲೂನುಗಳಲ್ಲಿ ಉಪಯೋಗಿಸುತ್ತಿದ್ದ ಬಿಸಿಗಾಳಿಯ ಬದಲಿಗೆ ಹಗುರಾದ ಹೈಡ್ರೊಜನನ್ನು ಉಪಯೋಗಿಸಬಹುದೆಂದು ತೋರಿಸಿದ (1783). ಮುಂದೆ 1787ರಲ್ಲಿ, ಇಂದು ನಾವು ಚಾಲ್ರ್ಸನ ನಿಯಮವೆಂದು ಕರೆಯುವ, ಸ್ಥಿರ ಒತ್ತಡದಲ್ಲಿ ಅನಿಲಗಳ ಉಷ್ಣತೆ ಮತ್ತು ಘನಗಾತ್ರಗಳಿಗಿರುವ ಸಂಬಂಧವನ್ನು ಕಂಡುಹಿಡಿದ. ಬಳಿಕ ಗ್ರೇವ್ ಸ್ಯಾಂಡ್ ಹೀಲಿಯೋಸ್ಟ್ಯಾಟ್, ಫ್ಯಾರೆನ್‍ಹೈಟ್ ಏರೋಮೀಟರ್ ಮುಂತಾದ ಉಪಕರಣಗಳನ್ನು ಪರಿಷ್ಕರಿಸಿದ್ದೇ ಅಲ್ಲದೆ ಥರ್ಮಾಮಿಟ್ರಿಕ್ ಹೈಡ್ರೋಮೀಟರ್, ಪ್ರತಿಫಲನತತ್ತ್ವದ ಮೇಲೆ ರಚಿಸಿದ ಗೋನಿಯೋಮೀಟರ್ ಮುಂತಾದ ಹೊಸಭೌತ ಉಪಕರಣಗಳನ್ನೂ ರಚಿಸಿದ. ಫ್ರಾನ್ಸಿನ ಅಕಾಡೆಮಿ ಡೆ ಸೈನ್ಸ್‍ಸಿನ ಸದಸ್ಯನಾಗಿ 1785ರಲ್ಲಿ ಆಯ್ಕೆಯಾದ. ಭೌತವಿಜ್ಞಾನದ ಪ್ರಾಧ್ಯಾಪಕನಾಗಿಯೂ ಸ್ವಲ್ಪ ಕಾಲ ಕೆಲಸ ಮಾಡಿದ.
(ಎ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ